ಕಾಡು ಹಂದಿ

ಇದು ಆರ್ಟಿಯೋಡ್ಯಾಕ್ಟೈಲ ಗಣದ ಸೂಯಿಡೀ ಕುಟುಂಬಕ್ಕೆ ಸೇರಿದ ಸಸ್ ಸ್ಕ್ರಾಫ ಕ್ರಸ್ಟೇಟಸ್, ಪೊಟ್ಯಾಮೊಕೀರಸ್ ಪಾರ್ಕಸ್, ಹೈಲೋಕೀರಸ್ ಮೈನರ್ಟ್‍ಜಾಗೆನಿ ಎಂಬ ಶಾಸ್ತ್ರೀಯ ಹೆಸರುಗಳುಳ್ಳ ವನವಾಸಿ ಹಂದಿಗಳಿರುವ ಸಾಮಾನ್ಯ ಹೆಸರು (ವೈಲ್ಡ್ ಬೋರ್). ಸಾಕುಹಂದಿಗಳ ಪೂರ್ವಜರಿವು. ಉದ್ದವಾದ ಚೂಪಾದ ತಲೆ, ಮೊಟಕಾದ ಕತ್ತು, ಗುಡಾಣದಂಥ ದೇಹ, ಮೊಂಡು ತುದಿಯ ಮೂತಿ, ಮೂತಿಯ ಕೊನೆಯಲ್ಲಿರುವ ಮೂಗಿನ ಹೊಳ್ಳೆಗಳು, ಸಣ್ಣ ಕಣ್ಣುಗಳು, ಉದ್ದನೆಯ ಕಿವಿಗಳು, ಒಂದೊಂದು ಪಾದದಲ್ಲೂ 4 ಬೆರಳುಗಳು ಮುಂತಾದ ಲಕ್ಷಣಗಳು ಎಲ್ಲ ಜಾತಿಗಳಲ್ಲೂ ಕಂಡುಬರುತ್ತವೆ. ಮೂತಿಯ ತುದಿಯಲ್ಲಿ ಮೃದ್ವಸ್ಥಿಯಿಂದ ರಚಿತವಾದ ತಟ್ಟೆಯೂ ಇದಕ್ಕೆ ಬಲ ಕೊಡುವಂತೆ ಒಂದು ಅನುನಾಸಿಕ ಮೂಳೆಯೂ ಇವೆ. ಇದರಿಂದಾಗಿ ಮೂತಿ ಬಲಯುತವಾಗಿದ್ದು ನೆಲವನ್ನು ತೋಡಲು ಅನುಕೂಲವಾಗಿದೆ. ಕಿವಿಗಳ ತುದಿಯಲ್ಲಿ ಕೂದಲಿನ ಕುಚ್ಚಿದೆ. ಪಾದದಲ್ಲಿನ ನಾಲ್ಕು ಬೆರಳುಗಳಲ್ಲಿ ಮಧ್ಯದವೆರಡು ಚಪ್ಪಟೆಯಾಗಿವೆಯಲ್ಲದೆ ಅವಕ್ಕೆ ಗೊರಸುಗಳಿವೆ. ಉಳಿದವೆರಡು ನೆಲದಿಂದ ಮೇಲಕ್ಕೇ ಇವೆ. ಎಲ್ಲ ಕಾಡುಹಂದಿಗಳ ಮರಿಗಳ ದೇಹದ ಮೇಲೂ ವಿಶೇಷವಾದ ಉದ್ದುದ್ದನೆಯ ಬಿಳಿಯ ಪಟ್ಟೆಗಳಿವೆ. ಕಾಡುಹಂದಿಗಳ ಇನ್ನೊಂದು ವಿಶೇಷ ಲಕ್ಷಣವೆಂದರೆ ಮೇಲಿನ ಮತ್ತು ಕೆಳಗಿನ ದವಡೆಯ ಕೋರೆ ಹಲ್ಲುಗಳು ಬಹಳ ಉದ್ದವಿದ್ದು ಬಾಯಿಯಿಂದ ಹೊರಚಾಚಿ ಮೇಲ್ಮುಖನಾಗಿ ಬಾಗಿರುವುದು. ಚಾಕುವಿನಷ್ಟು ಹರಿತವಾಗಿರುವ ಇವು ಹಂದಿಗಳ ಸ್ವರಕ್ಷಣೆಯ ಪ್ರಮುಖ ಸಾಧನಗಳಾಗಿವೆ. ಕೆಲವು ಪ್ರಭೇದಗಳಲ್ಲಿ ಈ ಕೋರೆ ಹಲ್ಲುಗಳು ಪ್ರಾಣಿ ಬದುಕಿರುವವರೆಗೂ ಬೆಳೆಯುತ್ತಲೇ ಇರುತ್ತವೆ.

 ಕಾಡುಹಂದಿಗಳು ಸಂಘಜೀವಿಗಳು. ಹಿಂಡಿನಲ್ಲಿ 40-50 ಪ್ರಾಣಿಗಳಿರುತ್ತವೆ. ಸ್ಥೂಲಕಾಯದವಾದರೂ ಇವು ಬಹಳ ವೇಗವಾಗಿ ಓಡಬಲ್ಲವು. ಇವಕ್ಕೆ ಚೆನ್ನಾಗಿ ಈಜುವುದಕ್ಕೂ ಬರುತ್ತದೆ. ಕೆಸರಿನಲ್ಲಿ ಬಿದ್ದು ಹೊರಳಾಡುವುದರೆಂದರೆ ಇವಕ್ಕೆ ಬಲು ಇಷ್ಟ. ಬಹಳ ಬಲಶಾಲಿ ಪ್ರಾಣಿಗಳೆಂದು ಹೆಸರಾಗಿರುವ ಇವು ಗಾಯಗೊಂಡಾಗ ಅಥವಾ ಶತ್ರುವಿನ ಆಕ್ರಮಣಕ್ಕೊಳಗಾದಾಗ ಬಲು ಕ್ರೂರವಾಗಿ ಅಸಾಮಾನ್ಯ ಧೈರ್ಯದಿಂದ ಹೋರಾಡಬಲ್ಲವು. ಚೂಪಾದ ಬಲವಾದ ಕೋರೆಗಳೇ ಇವುಗಳ ಆಯುಧ. ಶತ್ರು ಪ್ರಾಣಿ ಯಾವುದೇ ಇರಲಿ ದಿಟ್ಟತನದಿಂದ ಎದುರಿಸಬಲ್ಲವು. ಹುಲಿ, ಚಿರತೆ ಮುಂತಾದವನ್ನೂ ಎದುರಿಸಿ ಕೊಂದಿರುವ ನಿದರ್ಶನಗಳುಂಟು. ಸಾಧಾರಣವಾಗಿ ತಾವಾಗಿಯೇ ಆಕ್ರಮಣ ಮಾಡದಿದ್ದರೂ ಕೆಲವು ಬಗೆಯ ಕಾಡುಹಂದಿಗಳು ಯಾವ ಪ್ರಚೋದನೆಯೂ ಇಲ್ಲದೆ ಕೇವಲ ಆತ್ಮರಕ್ಷಣೆಗಾಗಿ ಮೇಲೆ ಬೀಳುತ್ತವೆ. ಕಾಡುಹಂದಿಗಳ ಚಟುವಟಿಕೆ ರಾತ್ರಿ ಕಾಲದಲ್ಲಿ ಹೆಚ್ಚು. ಸಂಜೆಯಿಂದ ಮುಂಜಾನೆಯವರೆಗೂ ಅವು ಆಹಾರಕ್ಕಾಗಿ ಅಲೆದಾಡುತ್ತವೆ. ಉಳಿದಂತೆ ಬೇರೆ ಪ್ರಾಣಿಗಳಿಂದ ದೂರವಾದ ಸ್ಥಳಗಳಲ್ಲಿ ಕೆಸರಿನಲ್ಲಿ ಹೊರಳಾಡಿಕೊಂಡೋ ಉದ್ದವಾಗಿ ಬೆಳೆದ ಹುಲ್ಲಿನ ಮರೆಯಲ್ಲೋ ಅಥವಾ ತಾವೇ ನಿರ್ಮಿಸಿಕೊಂಡ ಇಲ್ಲವೆ ಬೇರೆ ಪ್ರಾಣಿಗಳ ಬಿಲಗಳಲ್ಲೋ ಕಾಲ ಕಳೆಯುತ್ತವೆ. ಇವು ವಿವಿಧ ಬಗೆಯ ಆಹಾರವನ್ನು ತಿನ್ನುತ್ತವೆ. ಬೇರು, ಎಲೆ, ಕಂದಗೆಡ್ಡೆಗಳು, ಅಣಬೆಗಳು ಮುಂತಾದುವನ್ನೊಳಗೊಂಡ ಸಸ್ಯಾಹಾರವೇ ಪ್ರಧಾನವಾದರೂ ಕೆಲವು ಬಗೆಯವು ಎರೆಹುಳು, ಬಸವನಹುಳು, ಸಣ್ಣ ಇಲಿಗಳು, ಹಕ್ಕಿಗಳು, ಮೊಟ್ಟೆಗಳು ಮುಂತಾದವನ್ನೂ ತಿನ್ನುತ್ತವೆ. ಮೂತಿಯಿಂದ, ಕೋರೆ ಹಲ್ಲುಗಳಿಂದ ನೆಲವನ್ನು ಅಗೆದು ಆಹಾರವನ್ನು ಹುಡುಕಿ ಹೊರತೆಗೆದು ತಿನ್ನುವುದು ಇವಕ್ಕೆ ಇಷ್ಟ.

 ಕಾಡುಹಂದಿಗಳ ಸಂತಾನೋತ್ಪತ್ತಿಯ ಕಾಲ ಸಾಮಾನ್ಯವಾಗಿ ಅಕ್ಟೋಬರ್-ಡಿಸೆಂಬರ್ ತಿಂಗಳುಗಳು. ಒಂದು ಸೂಲಿಗೆ ಹುಟ್ಟುವ ಮರಿಗಳ ಸಂಖ್ಯೆ 2 ರಿಂದ 14ರವರೆಗೆ. ವಿವಿಧ ಪ್ರಭೇದಗಳಲ್ಲಿ ವ್ಯತ್ಯಾಸವಾಗಿತ್ತವೆ. ಅಂತೆಯೇ ಗರ್ಭಧಾರಣೆಯ ಅವಧಿಯೂ 112ರಿಂದ 175 ದಿವಸಗಳವರೆಗೆ ವ್ಯತ್ಯಾಸವಾಗುತ್ತದೆ. ಮರಿಗಳ ರಕ್ಷಣೆಯ ಭಾರ ಸಂಪೂರ್ಣವಾಗಿ ಹೆಣ್ಣು ಹಂದಿಯದು. ಮರಿಗಳು 11/2 ವರ್ಷ ವಯಸ್ಸಿನವಾಗುವ ವೇಳೆಗೆ ಲೈಂಗಿಕ ಪ್ರಬುದ್ದತೆಯನ್ನು ತಲುಪುವುದಾದರೂ ಪೂರ್ಣ ಬೆಳೆವಣಿಗೆಗೆ 5-6 ವರ್ಷ ಬೇಕು. ಕಾಡುಹಂದಿಗಳ ಆಯಸ್ಸು ಸುಮಾರು 20 ವರ್ಷಗಳು.

 ಸಸ್‍ಸ್ಕ್ರಾಫ ಎಂಬುದು ಯೂರೋಪಿನ ಕಾಡುಹಂದಿ. ಸ್ಪೇನ್, ಆಸ್ಟ್ರಿಯ, ಜರ್ಮನಿ, ಉತ್ತರ ಆಫ್ರಿಕ, ಮಧ್ಯ ಹಾಗೂ ಉತ್ತರ ಏಷ್ಯಗಳಲ್ಲಿ ಇದರ ವ್ಯಾಪ್ತಿಯಿದೆ. ಅಮೆರಿಕ ಸಂಯುಕ್ತಸಂಸ್ಥಾನಗಳ ಕೆಲವು ಪ್ರದೇಶಗಳಲ್ಲೂ (ಟೆನೆಸ್ಸಿ ರಾಜ್ಯದ ಪೂರ್ವ ಭಾಗ) ಯೂರೋಪಿನಿಂದ ಈ ಪ್ರಭೇದವನ್ನು ಕೊಂಡೊಯ್ದು ಬೆಳೆಸಲಾಗಿದೆ. ಸುಮಾರು 1 ಮೀ. ಎತ್ತರ ಮತ್ತು 1.8 ಮೀ. ಉದ್ದದ ಈ ಕಾಡುಹಂದಿ 75-200 ಕೆಜಿ. ತೂಗುತ್ತದೆ. ದೇಹದ ಬಣ್ಣ ಕಂದು ಅಥವಾ ಬೂದು ಮಿಶ್ರಿತ ಕಪ್ಪು. ಸಾಕುಹಂದಿಗಳ ಪೂರ್ವಜಪ್ರಾಣಿ ಇದು.

 

ಚಿತ್ರ ಯೂರೋಪಿನ ಕಾಡುಹಂದಿ ಸಸ್‍ಸ್ಕ್ರಾಫ

 ಸಸ್‍ಸ್ಕ್ರಾಫ ಕ್ರಿಸ್ಟ್ರೇಟಸ್ ಎಂಬ ಪ್ರಭೇದ ಭಾರತದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಾಡುಹಂದಿ. ಹಿಮಾಲಯದ 4500ಮೀ. ಎತ್ತರದ ಪ್ರದೇಶಗಳಿಂದ ಹಿಡಿದು ಮೈದಾನ ಪ್ರದೇಶಗಳ ಕಾಡುಗಳಲ್ಲೆಲ್ಲ ಇದು ಅಮಿತ ಸಂಖ್ಯೆಯಲ್ಲಿದೆ. ಸಿಂಹಳ ಮತ್ತು ಬರ್ಮಗಳಲ್ಲೂ ಕಾಡುಹಂದಿಗಳಿರುವ ವರದಿಗಳಿವೆ. ಯೂರೋಪಿನ ಕಾಡುಹಂದಿಗಿಂತ ಭಾರತದ್ದು ಹೆಚ್ಚು ಎತ್ತರ. ಮೈಮೇಲಿನ ಕೂದಲು ಒತ್ತಾಗಿಲ್ಲ. ಕತ್ತಿನಿಂದ ಬೆನ್ನಿನವರೆಗೂ ಕರಿಯ ಬಿರುಗೂದಲು ಹಬ್ಬಿದೆ. ಚಿಕ್ಕದಿದ್ದಾಗ ಬೂದುಮಿಶ್ರಿತ ಕಂದು ಬಣ್ಣಕ್ಕಿರುವ ಹಂದಿ ವಯಸ್ಸಾದಂತೆ ಕೆಂಗಂದು ಬಣ್ಣಕ್ಕೆ ತಿರುಗುತ್ತದೆ. ಇದು ಕಾಡುಹಂದಿಗಳಲ್ಲೆಲ್ಲ ಅತ್ಯಂತ ಧೈರ್ಯಶಾಲಿಯೂ ಕ್ರೂರಿಯೂ ಆದುದೆಂದು ಹೇಳಿಕೆ. ಅಂಡಮಾನ್ ದ್ವೀಪಗಳಲ್ಲಿ ಇದನ್ನು ಹೋಲುವ ಸಸ್‍ಸ್ಕ್ರಾಫ ಅಂಡಮಾನೆನ್ಸಸ್ ಒಂದು ಕುಳ್ಳು ಬಗೆಯ ಕಾಡುಹಂದಿ ಕಂಡುಬರುತ್ತದೆ. (ಸಸ್ ಸಾಲ್ವಾನಿಯಸ್). ಸುಮಾರು 33 ಮಿಮೀ. ಎತ್ತರ 66 ಸೆಂಮೀ. ಉದ್ದವಿರುವ ಇದೊ 8 ಕೆಜಿ. ತೂಗುತ್ತದೆ. ಇದರಲ್ಲಿ ಕತ್ತಿನ ಮೇಲಿನ ಕೇಸರ ಇಲ್ಲ; ಉಣ್ಣೆಯಂಥ ತುಪ್ಪುಳ ಕೂದಲೂ ಇಲ್ಲ. ಕಿವಿಯ ತುದಿಯಲ್ಲಿರುವ ಕೂದಲೂ ಗಿಡ್ಡ. ಹೆಣ್ಣಿನಲ್ಲಿ ಮೂರು ಜೊತೆ ಮೊಲೆಗಳು ಮಾತ್ರ ಇವೆ (ಉಳಿದ ಕಾಡು ಹಂದಿಗಳಲ್ಲಿ ಮೊಲೆಗಳ ಸಂಖ್ಯೆ 6 ಜೊತೆ). ಉಳಿದೆಲ್ಲ ಜೀವನ ಕ್ರಮದಲ್ಲಿ ಇದು ಭಾರತದ ಕಾಡುಹಂದಿಯನ್ನು ಹೋಲುತ್ತದೆ.

 

ಚಿತ್ರ ಆಫ್ರಿóಕಾದ ಕಾಡು ಹಂದಿ ಪೊಟ್ಯಾಮೊಕೀರಸ್ ಪಾರ್ಕಸ್

 ಪೊಟ್ಯಾಮೊಕೀರಸ್ ಪಾರ್ಕಸ್ ಎಂಬ ಶಾಸ್ತ್ರೀಯ ಹೆಸರಿನ ಕಾಡುಹಂದಿ ಆಫ್ರಿಕ ಖಂಡದ ಮೂಲವಾಸಿ. ಸಹಾರ ಮರುಭೂಮಿಯ ದಕ್ಷಿಣಕ್ಕಿರುವ ಪ್ರದೇಶಗಳಲ್ಲೂ ಮಡಗಾಸ್ಕರ್ ದ್ವೀಪದಲ್ಲೂ ಇದರ ವ್ಯಾಪ್ತಿಯಿದೆ. ಇದಕ್ಕೆ ಕೆಂಪು ಹೊಳೆ ಹಂದಿ (ರೆಡ್ ರಿವರ್ ಪಿಗ್) ಆಫ್ರಿಕದ ಪೊದೆ ಹಂದಿ (ಆಫ್ರಿಕನ್ ಬುಷ್ ಪಿಗ್) ಎಂಬ ಸಾಮಾನ್ಯ ಬಳಕೆಯ ಹೆಸರುಗಳಿವೆ. ಬೇರೆ ಕಾಡುಹಂದಿಗಳಿಗಿಂತ ಗಾತ್ರದಲ್ಲಿದು ಚಿಕ್ಕದ್ದು. ಇದರ ಉದ್ದ 1.3 ಮೀ. ಎತ್ತರ 58-96 ಸೆಂಮೀ. ತೂಕ 75-130 ಕೆಜಿ. ದೇಹದ ಬಣ್ಣ ಕೆಂಪು ಮಿಶ್ರಿತ ಕಂದು. ಆಲ್ಲಲ್ಲಿ ಬಿಳಿಯ ಅಥವಾ ಹಳದಿ ಬಣ್ಣದ ಕೂದಲುಗಳಿವೆ. ಕಿವಿಯ ತುದಿಯ ಕೂದಲುಗಳು ಬಲು ಉದ್ದ. ಎರಡು ಕೆನ್ನೆಗಳ ಮೇಲೂ ಬಹಳ ಉದ್ದವಾದ ಕೂದಲುಗಳಿರುವುವಲ್ಲದೆ ಗಂಡು ಹಂದಿಯಲ್ಲಿ ಒಂದೊಂದು ಕಣ್ಣಿನ ಮುಂಭಾಗದಲ್ಲಿ ಮೂತಿಯ ಮೇಲೆ ಉದ್ದವಾದ ಒಂದು ಗಂಟಿದೆ.

 ಮಧ್ಯ ಆಫ್ರಿಕದ ದಟ್ಟವಾದ ಕಾಡುಗಳಲ್ಲಿ ಹೈಲೋಕೀರಸ್ ಮೈನರ್ಟ್‍ಜಾಗೆನಿ ಎಂಬ ಹೆಸರಿನ ಕಾಡುಹಂದಿ ಕಾಣಸಿಗುತ್ತದೆ. ಇದರ ಉದ್ದ ಸುಮಾರು 76-86 ಸೆಂಮೀ. ಎತ್ತರ 15-19 ಸೆಂಮೀ. ದೇಹದ ಮೇಲೆಲ್ಲ ಉದ್ದವಾದ ಒರಟಾದ ಕಪ್ಪನೆಯ ಕೂದಲಿದೆ. ಚರ್ಮದ ಬಣ್ಣ ಕಪ್ಪು. ಕಣ್ಣಿನ ಸುತ್ತಣ ಪ್ರದೇಶ ರೋಮರಹಿತವಾಗಿರುವುದೂ ಕಣ್ಣಿನ ಮುಂಭಾಗದಲ್ಲಿ ಒಂದು ಗ್ರಂಥಿಯಿರುವುದೂ ಇದರ ವಿಶೇಷ ಲಕ್ಷಣಗಳು. ಸಾಮಾನ್ಯವಾಗಿ ಕೆಸರು ನೀರಿನಲ್ಲೇ ಹೆಚ್ಚು ಕಾಲ ಕಳೆಯುತ್ತದೆ. ಪೊದೆ ಸಸ್ಯಗಳ ಚಿಗುರು, ಹುಲ್ಲು ಇದರ ಪ್ರಧಾನ ಆಹಾರ.

 ಎಲ್ಲ ಕಾಡುಹಂದಿಗಳೂ ಹೊಲಗದ್ದೆಗಳಿಗೆ ನುಗ್ಗಿ ಪೈರು ಹಾಳು ಮಾಡುವುದರಲ್ಲಿ ಹೆಸರಾದ ಪ್ರಾಣಿಗಳು. ಗೆಡ್ಡೆಗೆಣಸಿನ ಬೆಳೆ ಇವಕ್ಕೆ ಬಲು ಇಷ್ಟ. ಹೀಗೆ ಇವು ಅಪಾರವಾದ ನಷ್ಟವುಂಟುಮಾಡುವುದರಿಂದ ಮಾನವನ ಶತ್ರುಗಳೆನಿಸಿವೆ; ಮಾನವ ಇವನ್ನು ಬೇಟೆಯಾಡುತ್ತ ಬಂದಿದ್ದಾನೆ. ಇವುಗಳ ರುಚಿಕರವಾದ ಮಾಂಸಕ್ಕಾಗಿಯೂ ಕೇವಲ ಮೃಗಯಾ ವಿನೋದಕ್ಕಾಗಿಯೂ ಇವನ್ನು ಬೇಟೆಯಾಡುವುದಿದೆ. ಕಾಡು ಹಂದಿ ಬಲು ಕ್ರೂರಿಯೂ ಬಲಶಾಲಿಯೂ ನಿರ್ಭಯವಾಗಿ ಶತ್ರುಗಳನ್ನು ಎದುರಿಸುವ ಛಾತಿಯುಳ್ಳದ್ದೂ ಆಗಿರುವುದರಿಂದ ಇದರ ಬೇಟೆ ಅತ್ಯಂತ ರೋಮಾಂಚಕಾರಿಯೂ ಅಪಾಯಕಾರಿಯೂ ಎನಿಸಿದೆ. ಕಾಡುಹಂದಿಯ ಬೇಟೆ ಬಹಳ ಹಿಂದಿನ ಕಾಲದಿಂದ ಭಾರತ ಮತ್ತು ಯೂರೋಪುಗಳಲ್ಲಿ ರೂಢಿಯಲ್ಲಿದೆ. ಹಿಂದೆ ಕುದುರೆಗಳ ಮೇಲೇರಿ ಭಲ್ಲೆ ಮುಂತಾದ ಆಯುಧಗಳಿಂದ ಸಜ್ಜಾಗಿ ಹಂದಿಗಳನ್ನು ಬೆನ್ನಟ್ಟಿ ಬೇಟೆಯಾಡುವುದಿತ್ತು. ಹಂದಿಯನ್ನು ಬೆನ್ನಟ್ಟಲು ಬೇಟೆನಾಯಿಗಳ ಅವಶ್ಯಕತೆಯೂ ಇದೆ. ಈಗ ಭಲ್ಲೆಗಳ ಬದಲು ಬಂದೂಕುಗಳು ಬಂದಿವೆ. ಕಾಡುಹಂದಿಯ ಬೇಟೆ ಹಿಂದೆ ಯೂರೋಪಿನ ಹಲವಾರು ರಾಜರುಗಳ ಅಚ್ಚು ಮೆಚ್ಚಿನ ಕ್ರೀಡೆಯಾಗಿತ್ತು. ಬೇಟೆ ಮುಗಿದ ಮೇಲೆ ಹಂದಿಯನ್ನು ಇಡಿಯಾಗಿಯೊ ಅದರ ತಲೆಯನ್ನೊ ಬೇಯಿಸಿ ರಸಭಕ್ಷ್ಯವಾಗಿ ಬಡಿಸುತ್ತಿದ್ದರು.

 ಕಾಡುಹಂದಿ ಇಂಗ್ಲೆಂಡಿನ 3ನೆಯ ರಿಚರ್ಡ್ ದೊರೆಯ ಲಾಂಛನವಾಗಿತ್ತು. ವಿಜಯನಗರ ಅರಸರ ಲಾಂಛನವೂ ಇದೇ.

 

(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ